ಬಾಲಮೆಣಸು
ಪೈಪರೇಸೀ ಕುಟುಂಬಕ್ಕೆ ಸೇರಿದ ಕಾಷ್ಠಮಯ ಬಳ್ಳಿ (ಕ್ಯೂಬೆಬ್ಸ್, ಟೇಲ್ಡ್ ಪೇಪರ್). ಒಳ್ಳೆ ಮೆಣಸಿನ ಹತ್ತಿರ ಸಂಬಂಧಿ. ಪೈಪರ್ ಕ್ಯೂಬೆಬ ಇದರ ವೈಜ್ಞಾನಿಕ ಹೆಸರು. ಇಂಡೋನೇಷ್ಯ ಇದರ ತವರು. ಭಾರತದಲ್ಲಿ ಬಹಳ ಕಡಿಮೆ ಪರಿಮಾಣದಲ್ಲಿ ಇದರ ಬೇಸಾಯ ಇದೆ. ಕರ್ನಾಟಕದ ಮಲೆನಾಡಿನ ಕೆಲವು ಭಾಗಗಳಲ್ಲಿ ಬಾಲಮೆಣಸನ್ನು ಬೆಳೆಸುವ ಯತ್ನ ನಡೆದಿದೆ. ಜಾವ, ಸುಮಾತ್ರ ಮುಂತಾದೆಡೆಗಳಿಂದ ಇದರ ಕಾಳುಗಳನ್ನು ಆಯಾತಮಾಡಿಕೊಳ್ಳಲಾಗುತ್ತಿದೆ.

ಇದರ ಎಲೆಗಳು ಹೆಚ್ಚುಕಡಿಮೆ ವೀಳೆಯದೆಲೆ ಅಥವಾ ಮೆಣಸಿನ ಎಲೆಗಳಂತೆಯೇ ಇವೆ. ಹೂಗಳು ಕ್ಯಾಟ್‍ಕಿನ್ ಮಾದರಿಯ ಗೊಂಚಲುಗಳಲ್ಲಿ ಅರಳುವುವು. ಫಲಗಳು ಬೇರೆ ಬಗೆಯವು: 6-8 ಮಿಮೀ. ವ್ಯಾಸದ ಗುಂಡನೆಯ ಕಾಳುಗಳಂತಿವೆ. ಕಾಳುಗಳು ಚಿಕ್ಕವಾಗಿರುವಾಗ ಮೆಣಸಿನಂತೆಯೇ ಕಾಣುತ್ತವೆ. ಪಕ್ವವಾಗುತ್ತಿದ್ದಂತೆ ಫಲಾವರಣದ ಬುಡ ಅಸಾಧಾರಣವಾಗಿ ಬೆಳೆಯುವುದರಿಂದ ಪ್ರತಿಕಾಳಿಗೂ ಒಂದು ತೊಟ್ಟು (ಬಾಲ) ಹೊರಟಂತೆ ಭಾಸವಾಗುತ್ತದೆ. ಆದ್ದರಿಂದಲೇ ಇದಕ್ಕೆ ಬಾಲಮೆಣಸು ಎಂಬ ಹೆಸರು.

ಬಾಲಮೆಣಸಿನ ಬಳ್ಳಿಯನ್ನು ಕಾಫೀ ತೋಟಗಳಲ್ಲಿಯ ನೆರಳಿನ ಮರಗಳ ಕೆಳಗೆ ಸಸಿ ನೆಟ್ಟು ಸುಲಭವಾಗಿ ಬೆಳೆಯಬಹುದು. ಫಲಗಳನ್ನು ಕೊಯ್ಲು ಮಾಡುವುದು ಅವು ಪೂರ್ಣ ಬೆಳೆದಾಗ ಆದರೆ ಇನ್ನೂ ಹಸಿರಿದ್ದಾಗ, ಅನಂತರ ಅವನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಆಗ ಅವು ಕಪ್ಪುಬಣ್ಣ ತಳೆದ ಸುರುಟಿಕೊಳ್ಳುತ್ತವೆ. ಒಳ್ಳೆಯ ದರ್ಜೆಯ ಕಾಳುಗಳ ಬಣ್ಣ ಕಪ್ಪುಛಾಯೆಯ ಕೆಂಪು; ಅಪರೂಪಕ್ಕೆ ಬೂದು. ಇವಕ್ಕೆ ಘಾಟು ಪರಿಮಳವೂ ಸ್ವಲ್ಪ ಕಟು ಹಾಗೂ ತಿಕ್ತ ರುಚಿಯೂ ಇದೆ. ಇದಕ್ಕೆ ಕಾರಣ ಕಾಳುಗಳಲ್ಲಿರುವ ಚಂಚಲತೈಲ (ಆಯಿಲ್ ಆಫ್ ಕ್ಯೂಬೆಬ್) ಕಾಳುಗಳನ್ನು ಪುಡಿಮಾಡಿ ಆವಿ ಆಸವನದ ಮೂಲಕ ಇದನ್ನು ಹೊರತೆಗೆಯಲಾಗುತ್ತದೆ. ಸ್ನಿಗ್ಧ ರೂಪದ್ದೂ ತೆಳು ಇಲ್ಲವೆ ನೀಲಿ ಮಿಶ್ರಿತ ಹಸುರು ಬಣ್ಣದ್ದೂ ಆದ ಈ ಎಣ್ಣೆಗೆ ಔಷಧೀಯ ಮಹತ್ತ್ವವುಂಟು. ಪುಡಿಮಾಡಿದ ಕಾಳುಗಳನ್ನು ಭೇದಿ ಶ್ಲೇಷ್ಮ ಜ್ವರಗಳಲ್ಲಿ ಕೊಡುವುದುಂಟು. ಇವಕ್ಕೆ ಉದ್ದೀಪಕ, ಸ್ಥಾನಿಕ ಕ್ಷೋಭಕ, ಆಸ್ತ್ಮಾವಿರೋಧಿ, ಮೂತ್ರೋತ್ತೇಜಕ, ಜೀರ್ಣಕಾರಿ, ಶಾಮಕ, ಕಫಹಾರಿ ಗುಣಗಳುಂಟು ಹಿಂದೆ ಕಾಳುಗಳಂತೆಯೇ ಎಣ್ಣೆಯನ್ನೂ ಬಳಸುತ್ತಿದ್ದರು. ಆದರೆ ಈಗ ಗಂಟಲಿನ ಕೆರೆತಗಳಿಗೆ ಪರಿಹಾರವೆಂದು ಮಿಠಾಯಿಗಳ ರೂಪದಲ್ಲಿ ವಿನಾ ಬೇರಾವ ರೀತಿಯಲ್ಲೂ ಈ ಎಣ್ಣೆಯನ್ನು ಬಳಸುವುದಿಲ್ಲ. ಒಮ್ಮೊಮ್ಮೆ ಕಹಿರುಚಿಯ ಪದಾರ್ಥ ಹಾಗೂ ಸಿಗರೇಟ್‍ಗಳಿಗೆ ಪರಿಮಳ ನೀಡಲು ಬಳಸುವುದುಂಟು.

ಬಾಲಮೆಣಸಿನ ಆಲ್ಕೊಹಾಲ್ ಸಾರಕ್ಕೆ ಬ್ಯಾಕ್ಟೀರಿಯ ವಿರೋಧಿ (ಮೈಕ್ರೋಕಾಕಸ್ ಪೈಯೋಜಿನಸ್ ಹಾಗೂ ಬ್ಯಾಸಿಲಸ್ ಟೈಫೊಸಸ್ ಎಂಬ ಬ್ಯಾಕ್ಟೀರಿಯಗಳ ವಿರುದ್ಧ) ಗುಣವಿದೆಯೆನ್ನಲಾಗಿದೆ.
(ಕೆ.ಎಚ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ